ಕ್ಯಾಲಿಸ್ಟೀಮಾನ್ 

ಆಸ್ಟ್ರೇಲಿಯದ ಮೂಲವಾಸಿಯಾದ ಒಂದು ಸಸ್ಯಜಾತಿ.  ಕಡುಗೆಂಪು ಬಣ್ಣದ ಕೇಸರಗಳಿಂದ ಬಲು ಸುಂದರವಾಗಿ ಕಾಣುವುದರಿಂದ ಇದನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ, ರಸ್ತೆಯ ಅಕ್ಕಪಕ್ಕಗಳಲ್ಲಿ, ಶಾಲೆಯ ಅಂಗಳದಲ್ಲಿ ಬೆಳೆಸುತ್ತಾರೆ.  ಚೆಲುವಾದ ಕೇಸರಗಳಿಂದಾಗಿಯೆ ಗಿಡಕ್ಕೆ ಈ ಹೆಸರು ಬಂದಿದೆ.  (ಗ್ರೀಕ್ ಭಾಷೆಯಲ್ಲಿ ಕ್ಯಾಲಿಸ್ಟೀಮಾನ್ ಎಂದರೆ ಸುಂದರವಾದ ಕೇಸರ ಎಂದು ಅರ್ಥ).  ಅಲ್ಲದೆ ಇದರ ಹೂಗೊಂಚಲುಗಳು ಸೀಸೆ ತೊಳೆಯಲು ಬಳಸುವ ಬ್ರಷ್ಷಿನಂತೆ ಕಾಣುವುದರಿಂದ ಇದಕ್ಕೆ ಬಾಟಲ್ ಬ್ರಷ್ ಎಂಬ ಹೆಸರೂ ಇದೆ.

ಕ್ಯಾಲಿಸ್ಟೀಮಾನ್ ಸುಮಾರು 6'-30' ಎತ್ತರಕ್ಕೆ ಬೆಳೆಯುವ ಪೊದೆ ಇಲ್ಲವೆ ಮರ.  ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ.  ಅಲಗಿನಲ್ಲಿ ತೈಲ ಅಥವಾ ರಾಳಗ್ರಂಥಿಗಳಿವೆ.  ಎಲೆಗಳನ್ನು ಮುದುಡಿದರೆ ಒಂದು ಬಗೆಯ ಸುವಾಸನೆ ಹೊರಡುತ್ತದೆ.  ಹೂಗಳು ಉರುಳೆಯಾಕಾರದ ಹೂಗೊಂಚಲಿನಲ್ಲಿ ದಟ್ಟವಾಗಿ ಸಮಾವೇಶಗೊಂಡಿವೆ.  ರೆಂಬೆಗಳ ತುದಿಯಲ್ಲೆ ಹೂಗೊಂಚಲು ಹುಟ್ಟುವುದಾದರೂ ಕೆಲಕಾಲಾ ನಂತರ ಹೂಗೊಂಚಲಿನ ದಿಂಡು ಗೊಂಚಲಿನ ತುದಿಯಿಂದ ಹೊರಕ್ಕೆ ಬೆಳೆದು ಮತ್ತೆ ಎಲೆಗಳನ್ನು ಉತ್ಪತ್ತಿ ಮಾಡುತ್ತದೆ.  ಒಂದೊಂದು ಹೂವಿನಲ್ಲಿ  5 ಪುಷ್ಪಪತ್ರಗಳು, 5 ದಳಗಳು, ಅಸಂಖ್ಯಾತ ಕೇಸರಗಳು, ನೀಚಸ್ಥಾನ ಅಂಡಾಶಯ ಇವೆ.

ಕ್ಯಾಲಿಸ್ಟೀಮಾನನ್ನು ಬೀಜಗಳಿಂದ ವೃದ್ಧಿಸಬಹುದು. ಅದೇ ತಾನೆ ಬಲಿತಿರುವ ಕಾಯಿಗಳನ್ನು ಪೆಟ್ಟಿಗೆ ಇಲ್ಲವೆ ಕಾಗದದ ಚೀಲಗಳಲ್ಲಿ ಶೇಖರಿಸಿ ಅವುಗಳೊಳಗೇ ಒಡೆಯುವಂತೆ ಮಾಡಿ ಬೀಜಗಳನ್ನು ಸಂಗ್ರಹಿಸಲಾಗುತ್ತದೆ. ವಸಂತಋತುವಿನ ಆದಿಯಲ್ಲಿ ಗೋಡು, ಮರಳು ಮತ್ತು ಎಲೆಗೊಬ್ಬರಗಳ ಮಿಶ್ರಣದಲ್ಲಿ ಬಿತ್ತಿ ಮೊಳಕೆಯೊಡೆಸಲಾಗುತ್ತದೆ.  ಅನಂತರ ಸಸಿಗಳು ಸಾಕಷ್ಟು ದೊಡ್ಡವಾದ ಮೇಲೆ ಅವನ್ನು ಬೇಕೆನಿಸಿದ ಕಡೆಗೆ ನಾಟಿ ಮಾಡಿ ವೃದ್ಧಿಸಲಾಗುತ್ತದೆ.

ಕ್ಯಾಲಿಸ್ಟೀಮಾನ್ ಜಾತಿಯಲ್ಲಿ ಸುಮಾರು 25 ಪ್ರಭೇದಗಳಿವೆ.  ಇವುಗಳಲ್ಲಿ ಲ್ಯಾನ್ಸಿಯೊಲೇಟಸ್, ಸ್ಟೀಶಿಯೋಸಸ್, ರಿಜಿಡಸ್, ಸ್ಯಾಲಿಗ್ನಸ್ ಮತ್ತು ಬ್ರಾಕಿಯಾಂಡ್ರಸ್ ಪ್ರಭೇದಗಳು ಮುಖ್ಯವಾದವು.  			  (ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ